ನನ್ನ ಕಥೆ ಸಾಮಾನ್ಯ ಸುದ್ದಿ ಸಿನಿಮಾ ಜಗತ್ತು

ವಿಜ್ಞಾನಿ ಆಗಬೇಕಿದ್ದ ಕಾಶಿನಾಥ್ ನಟ-ನಿರ್ದೇಶಕರಾದ್ರು

ಏನ್ ಸಾರ್, ನಿಮ್ಗೆ ಅರುಳು ಮರುಳಾ? – ಅಂತ ನೇರವಾಗಿ ಕೇಳಿದ್ದೆ! ಬೇರೆ ಯಾರೇ ಆಗಿದ್ದರೆ ನಾಲ್ಕು ತದಕಿಬಿಡುತ್ತಿದ್ದರೋ ಏನೋ? ಆದರೆ ಕಾಶೀನಾಥ್ ಹಾಗೆ ಮಾಡಲಿಲ್ಲ. ಬದಲು ಜೋರಾಗಿ ನಕ್ಕು ಬಿಟ್ಟಿದ್ದರು! ಕಾಶಿನಾಥ್ ಇರುವುದೇ ಹಾಗೆ. ನಗಬೇಕಾದಲ್ಲಿ ಸಿಟ್ಟು ಮಾಡಿಕೊಳ್ಳುತ್ತಾರೆ, ಸಿಟ್ಟು ಮಾಡಿಕೊಳ್ಳಬೇಕಾದಲ್ಲಿ ನಗುತ್ತಾರೆ! ನಾನು ಕೇಳಿದ ಪ್ರಶ್ನೆಯ ಉದ್ದೇಶ ನಿಮಗೆ ಗೊತ್ತಾದರೆ, ನೀವು ಕೂಡ ಕಾಶಿನಾಥ್​ಗೆ ಇದೇ ಪ್ರಶ್ನೆಯನ್ನು ಕೇಳಿರುತ್ತಿದ್ದೀರಿ! ಕಾರಣ; ಅವರು ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಅವರ ಪತ್ರಕ್ಕಾಗಿ ಕಾಯುತ್ತ ಮನೆಯಲ್ಲಿ ಕೂತಿದ್ದರು!

ವಿಷಯಕ್ಕೆ ಬರುವ ಮೊದಲು ನನ್ನ ಮತ್ತು ಕಾಶಿನಾಥ್ ಅವರ ಸ್ನೇಹ ಸಂಬಂಧದ ಬಗ್ಗೆ ನಾಲ್ಕು ಮಾತು: ‘ಅಪರಿಚಿತ’ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಕಾಶಿನಾಥ್ ಭೇಟಿಯಾಯಿತು. ಅಲ್ಲಿಂದ ಮೊನ್ನೆ ಚೌಕ ಚಿತ್ರದವರೆಗೆ ಅಖಂಡ ಸಂಪರ್ಕವಿತ್ತು. ನೀವೆಲ್ಲ ಕಾಶಿನಾಥ್ ಅವರ ಸಿನಿಮಾ ಮುಖವನ್ನು ಮಾತ್ರ ನೋಡಿರಬಹುದು, ಆದರೆ ನಾನು ನೋಡಿದ ಕಾಶಿನಾಥ್ ಮುಖವೇ ಬೇರೆ. ಅದು ಸಹಸ್ರ ಮುಖ! ಈಗ ಅರುಳು ಮರುಳಿನ ವಿಷಯಕ್ಕೆ ಬರುತ್ತೇನೆ. ಅವರ ಕ್ರಿಯಾಶೀಲತೆ ಜಾಗೃತವಾಗಿರುವುದು ಪತ್ರ ಬರೆಯುವುದರಲ್ಲಿ! ನಂಬಿದರೆ ನಂಬಿ ಬಿಟ್ರೆ ಬಿಡಿ, ಅಂದು ನಾನು ಕಾಶಿನಾಥ್ ಅವರನ್ನು ಭೇಟಿಯಾಗಲೆಂದು ಅವರ ಜಯನಗರದ ಮನೆಗೆ ಮತ್ತೊಮ್ಮೆ ಹೋದಾಗ ಬರಾಕ್ ಒಬಾಮಾ ಅವರ ಉತ್ತರಕ್ಕಾಗಿ ಕಾಯುತ್ತ ಕೂತಿದ್ದರು! ಭರಪೂರ ಮಳೆ ಬಂದಾಗ ಅದರ ನೀರನ್ನು ಅಡ್ಡಗಟ್ಟಿ ಹೇಗೆ ಲೋಕೋಪಯೋಗಿಯಾಗುವಂತೆ ಬಳಸಿಕೊಳ್ಳಬಹುದು ಎನ್ನುವ ಬಗ್ಗೆ ಚರ್ಚೆ ಸಹಿತ ವಾಗ್ವಾದವನ್ನು ಬರೆದು ಒಬಾಮಾ ಅವರಿಗೆ ಪೋಸ್ಟ್ ಮಾಡಿ ಉತ್ತರಕ್ಕಾಗಿ ಕಾಯುತ್ತಿದ್ದರು! ಈಗ ಹೇಳಿ, ನಾನು ಕೇಳಿದ ಪ್ರಶ್ನೆ ಅಧಿಕ ಪ್ರಸಂಗದ್ದಾ? ಮತ್ತೊಮ್ಮೆ ಇದ್ದಕ್ಕಿದ್ದಂತೆ ಫೋನ್ ಮಾಡಿ ಸೋನಿಯಾ ಗಾಂಧಿಯವರ ಫೋನ್ ನಂಬರ್ ಕೇಳಿದ್ದರು! ಗಾಬರಿಯಿಂದ ನಾನು ಏಕೆಂದು ಕೇಳಿದರೆ ಕಾಶಿನಾಥ್ ಉತ್ತರಿಸಿದ್ದು ಹೀಗೆ; ‘ನೋಡಿ.. ಬೆಂಗಳೂರಿನ ರಸ್ತೆಗಳಿಗೆ ಹಾಕಿಸುವ ಡಾಂಬರಿನ ಗುಣಮಟ್ಟ ಸರಿಯಾಗಿಲ್ಲ. ಮಿಕ್ಸ್ ಮಾಡಬೇಕಾದ ಜಲ್ಲಿಯ ಪ್ರಮಾಣವೂ ಕಮ್ಮಿಯಿದೆ. ಹೀಗಾಗಿಯೇ ನಾಲ್ಕೈದು ತಿಂಗಳಲ್ಲೇ ರಸ್ತೆಗಳು ಗಬ್ಬೆದ್ದು ಹೋಗುತ್ತಿವೆ! ಈ ವಿಚಾರವಾಗಿ ಸೋನಿಯಾ ಗಾಂಧಿ ಜೊತೆ ರ್ಚಚಿಸಬೇಕಾಗಿತ್ತು! ನೇರವಾಗಿ ಅವರ ಜತೆಗೇ ಮಾತಾಡೋಣ ಅಂತ…’! ಕಾಶಿನಾಥ್ ಇಷ್ಟು ಹೇಳುವಷ್ಟರಲ್ಲಿ ನನ್ನ ಹೃದಯ ಬಡಿತ ಹೆಚ್ಚಾಗಿತ್ತು. ಯಾಕೆ ನಿಮಗೆ ಈ ಹುಚ್ಚು? ಹೀಗೆಂದು ಒಮ್ಮೆ ನೇರವಾಗಿ ಕೇಳಿದ್ದೆ. ಅದಕ್ಕೂ ಅವರಲ್ಲಿ ಉತ್ತರವಿತ್ತು. ‘ನೋಡಿ ಗಣೇಶ್ ಅವರೇ, ಇಲ್ಲಿ ಯಾವುದು ಸರಿ ಇದೆ ಹೇಳಿ? ಬರೀ ಕಾಮೆಂಟ್ ಮಾಡುತ್ತ ಕೂತರೆ ಪರಿಹಾರ ಸೂಚಿಸುವವರು ಯಾರು? ಈ ನಿಟ್ಟಿನಲ್ಲಿ ನನ್ನದು ಅಳಿಲ ಸೇವೆ. ನನ್ನಿಂದಾಗಿ ಎಲ್ಲವೂ ಸರಿಯಾಗಿಬಿಡುತ್ತದೆ ಎಂಬ ಭ್ರಮೆ ನನಗಿಲ್ಲ. ನನ್ನ ಕೈಲಾದದ್ದನ್ನು ನಿರ್ವಚನೆಯಿಂದ ಮಾಡುತ್ತಿದ್ದೇನೆ’ ಎಂದಿದ್ದರು. ಕಾಶಿನಾಥ್ ಅವರ ಉತ್ತರ ಕೇಳಿ ಮತ್ತೆ ಉಗುಳು ನುಂಗಿಕೊಂಡೆ! ಸ್ವಲ್ಪವೇ ಸ್ವಲ್ಪ ವಿಲಕ್ಷಣ ಸ್ವಭಾವದ ಕಾಶಿನಾಥ್ ಈ ದೇಶದ ಆರ್ಥಿಕ ಸ್ಥಿತಿಗತಿಯ ಬಗ್ಗೆ, ನೆಲಜಲದ ಬಗ್ಗೆ, ಟೆರರಿಸಂ, ನಕ್ಸಲಿಸಮ್ ಬಗ್ಗೆ ತಮ್ಮದೇ ಆದ ನಿಲುವನ್ನು ಹೊಂದಿದ್ದರು. ಅವರು ಬರೀ ನಿರ್ದೇಶಕರಲ್ಲ, ನಟರೂ ಅಲ್ಲ. ಮೂಲತಃ ಇವರಲ್ಲೊಬ್ಬ ವಿಜ್ಞಾನಿ ಇದ್ದಾರೆ! ಈ ಬಗ್ಗೆ ಸ್ವತಃ ಕಾಶಿನಾಥ್ ಹೇಳುವುದಿಷ್ಟು; ನಿಜ ಹೇಳಬೇಕೆಂದರೆ ನಾನೊಬ್ಬ ವಿಜ್ಞಾನಿ ಆಗಿರಬೇಕಿತ್ತು! ನಂಗೆ ವಿಜ್ಞಾನ ಅಂದ್ರೆ ಪ್ರಾಣ. ದುರದೃಷ್ಟವಶಾತ್ ನಿರ್ದೇಶಕನಾದೆ. ನೋ ಪ್ರಾಬ್ಲಮ್ ಚಿತ್ರರಂಗಕ್ಕೆ ಬಂದರೂ ನನ್ನೊಳಗಿನ ವಿಜ್ಞಾನಿ ಸಾಯಲಿಲ್ಲ. ಸೋಷಿಯಲ್ ಸೈನ್ಸ್ ಮೂಲಕ ಪಾತ್ರಗಳನ್ನು ಸೃಷ್ಟಿಸಿ ಸಮಾಜದ ಉದ್ದಾರಕ್ಕೆ ಅಳಿಲು ಸೇವೆ ಸಲ್ಲಿಸುತ್ತಿದ್ದೇನೆ. ನಾನು ಸೋಮಾರಿಯಾಗಿ ಎಂದೂ ಕುಳಿತಿಲ್ಲ. ಮುಂಜಾನೆಯಿಂದ ರಾತ್ರಿ ತನಕ ಏನಾದರೂ ಅಧ್ಯಯನದಲ್ಲಿ ತೊಡಗಿರುತ್ತೇನೆ. ಇದಕ್ಕೆ ಇಲ್ಲಿರುವ ಪೇಪರ್ ಕಟ್ಟಿಂಗ್, ಫೈಲುಗಳೇ ಸಾಕ್ಷಿ’- ಎಂದು ಹೇಳಿ ತಮ್ಮ ಮೇಜು ತುಂಬ ಹರಡಿರುವ ಕಾಗದ ಪತ್ರಗಳನ್ನು ತೋರಿಸಿದರು.

ಇಂಥ ಫೈಲುಗಳಲ್ಲಿ ಅಡಗಿ ಕುಳಿತ ಪ್ರಾಜೆಕ್ಟ್​ಗಳ ಸಂಖ್ಯೆ ನೂರಾರು. ಅವುಗಳಲ್ಲಿ ಒಂದು ಟ್ರಾಫಿಕ್ ಸಿಗ್ನಲ್​ಗಳಿಗೆ ಕೌಂಟ್ ಡೌನ್ ನಂಬರನ್ನು ಬಳಸಿಕೊಳ್ಳುವ ಬಗೆಗಿನ ಪ್ರಾಜೆಕ್ಟ್! ಹೀಗೆ ಕೌಂಟ್ ಡೌನ್ ನಂಬರ್ ಬರುತ್ತಿದ್ದರೆ ವಾಹನಗಳನ್ನು ಆಫ್ ಮಾಡಿ ಪೆಟ್ರೋಲ್ ಉಳಿಸಬಹುದು ಎನ್ನುವುದು ಕಾಶಿನಾಥ್ ತಲೆಗೆ ಹೊಳೆದ ಐಡಿಯಾ. ಈ ಐಡಿಯಾವನ್ನು ನನ್ನ ಬಳಿ ಹೇಳಿಕೊಂಡಾಗ ಯಥಾಪ್ರಕಾರ ನಕ್ಕಿದ್ದೆ. ಕಾಶಿನಾಥ್ ಗುರಾಯಿಸಿದ್ದರು! ಅಚ್ಚರಿಯ ವಿಷಯ ಅಂದರೆ, ಕಾಶಿನಾಥ್ ಈ ಬಗ್ಗೆ ನನ್ನಲ್ಲಿ ಹೇಳಿಕೊಂಡ ಒಂದೇ ವರ್ಷದಲ್ಲಿ ಬೆಂಗಳೂರಿನಲ್ಲಿ ಈ ಪ್ರಯೋಗವನ್ನು ಯಶಸ್ವಿಯಾಗಿ ಅಳವಡಿಸಿಕೊಳ್ಳಲಾಯಿತು! ಈಗ ನೀವೇ ಹೇಳಿ ಕಾಶಿನಾಥ್​ಗೆ ಅರುಳು ಮರುಳಾ?ಮತ್ತೊಮ್ಮೆ ನಾನು ಕೆಲಸ ಮಾಡುತ್ತಿದ್ದ ಪತ್ರಿಕಾ ಕಚೇರಿಗೆ ಬಂದ ಅವರು ಅವೆನ್ಯೂ ರಸ್ತೆಗೆ ಹೇಗೆ ಫ್ಲೈಓವರ್ ನಿರ್ವಿುಸಬಹುದು ಎನ್ನುವುದರ ಬಗ್ಗೆ ರೇಖಾ ಚಿತ್ರದ ಸಹಿತ ವಿವರಿಸಿದ್ದರು! ಆ ಮೇಲೆ ಬೆಂಗಳೂರಿನ ಯಾವ ಯಾವ ರಸ್ತೆಗಳಲ್ಲಿ ಫ್ಲೈಓವರ್ ಆದುವು ಎನ್ನುವುದು ನಮಗೆ ನಿಮಗೆಲ್ಲ ಗೊತ್ತಿದೆ. ಕೊನೆಯಲ್ಲಿ: ನಾನು ಕಾಶಿನಾಥ್ ಅವರನ್ನು ಕೊನೆಯ ಬಾರಿ ಭೇಟಿಯಾದದ್ದು ‘ಚೌಕ’ ಚಿತ್ರ ನೋಡಿದ ಮೇಲೆ. ಚಿತ್ರಮಂದಿರದಿಂದ ನೇರವಾಗಿ ಜಯನಗರದ ಅವರ ಮನೆಗೆ ಹೋಗಿ ಅಭಿನಂದನೆ ತಿಳಿಸಿದ್ದೆ. ಆ ಹೊತ್ತಿಗಾಗಲೇ ಕಾಶಿನಾಥ್ ಅವರಿಗೆ ಕೆಮ್ಮು ಶುರುವಾಗಿತ್ತು. ಮೈ ತುಂಬ ಶಾಲು ಹೊದ್ದುಕೊಂಡಿದ್ದರು. ವಿಪರೀತ ಚಳಿಯಿಂದ ನಡುಗುತ್ತಿದ್ದರು. ಸರಿಯಾಗಿ ಮಾತಾಡಲು ಸಾಧ್ಯವಾಗುತ್ತಿರಲಿಲ್ಲ. ಗೊರ ಗೊರ ಸದ್ದು. ಒಮ್ಮೆ ಗಂಟಲನ್ನು ಚೆಕಪ್ ಮಾಡಿಸಿಕೊಳ್ಳಿ ಅಂದಿದ್ದೆ. ಕಿದ್ವಾಯಿ ವೈದ್ಯರ ಪರಿಚಯವಿದೆ, ಹೋಗುವಿರಾ ಅಂತಲೂ ಕೇಳಿದ್ದೆ. ಅಷ್ಟೇ…. ಕಾಶಿನಾಥ್ ಇನ್ನಿಲ್ಲ. ಅಖಂಡ 30 ವರ್ಷಗಳ ಚಿತ್ರರಂಗದ ಗೆಳೆಯ ಕಾಲವಾಗಿದ್ದಾನೆ. ಮುಂದಿನ ಜನ್ಮವೇನಾದರೂ ಇದ್ದರೆ ವಿಜ್ಞಾನಿಯಾಗಿ ಹುಟ್ಟಿ ಬಾ ಎಂದಷ್ಟೇ ಹೇಳಬಲ್ಲೆ.

Leave a Reply

Your email address will not be published. Required fields are marked *