ಪ್ರಚಲಿತ ವಿದ್ಯಮಾನ ಸಾಮಾನ್ಯ ಸುದ್ದಿ

ನಾಲ್ಕು ದಿನಗಳ ಕೃಷಿ ಮೇಳಕ್ಕೆ ತೆರೆ

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಜಿಕೆವಿಕೆ ಆವರಣದಲ್ಲಿ ಕಳೆದ ನಾಲ್ಕು ದಿನಗಳಿಂದ ಏರ್ಪಡಿಸಿರುವ ಕೃಷಿ ಮೇಳಕ್ಕೆ ಇಂದು ಸಂಜೆ ತೆರಬೀಳಲಿದೆ. ಅನ್ನದಾತನ ಬದುಕಿನಲ್ಲಿ ಮಂದಹಾಸ ಮೂಡಿಸುವ ಪ್ರಯತ್ನವಾಗಿ ವಿಶ್ವವಿದ್ಯಾಲಯ ಪ್ರತಿವರ್ಷ ಏರ್ಪಡಿಸುತ್ತಿರುವ ಕೃಷಿ ಮೇಳಕ್ಕೆ ಲಕ್ಷಾಂತರ ಮಂದಿ ಕೃಷಿ ಆಸಕ್ತರು ಆಗಮಿಸಿ ಕೃಷಿಯಲ್ಲಿ ಆಗುತ್ತಿರುವ ಬೆಳವಣಿಗೆ ಮತ್ತು ಹೊಸ ತಂತ್ರಜ್ಞಾನದ ಬಗ್ಗೆ ಮಾಹಿತಿ ಪಡೆದುಕೊಂಡರು.

ಕರ್ನಾಟಕ ರಾಜ್ಯಪಾಲ ವಜುಭಾಯಿ ವಾಲ ಅವರು ಬೆಂಗಳುರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಯುಎಎಸ್)ನಲ್ಲಿ ಕೃಷಿ ಮೇಳವನ್ನು ಉದ್ಘಾಟಿಸಿದ್ದರು. ಮೊದಲ ದಿನವೇ ೧.೨೫ ಲಕ್ಷ ಜನ ಭಾಗವಹಿಸಿದ್ದರು. ಒಟ್ಟಾರೆ ೮ ಲಕ್ಷಕ್ಕೂ ಅಧಿಕ ಮಂದಿ ಮೇಳಕ್ಕೆ ಆಗಮಿಸಿದ್ದರು.

ಮೇಳದಲ್ಲಿ ಒಟ್ಟು ೭೦೦ ಮಳಿಗೆಗಳನ್ನು ತೆರೆಯಲಾಗಿತ್ತು. ವಿವಿಧ ಕೃಷಿ ಪದಾರ್ಥಗಳು, ಕೃಷ ಬಳಕೆಯ ಸಲಕರಣೆಗಳ ವೈವಿಧ್ಯಮಯ ಉತ್ಪನ್ನಗಳು ಲಭ್ಯವಿದೆ. ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳು, ಸ್ವಯಂ ಸೇವಾ ಸಂಘಗಳು, ಕೃಷಿ ಸಲಹೆಗಾರರು, ಕೃಷಿ ಉತ್ಪನ್ನ ಮಾರಾಟಗಾರರು ಮತ್ತು ರೈತರು ಇಲ್ಲಿ ಮಳಿಗೆಗಳನ್ನು ತೆರೆಯಲಾಗಿತ್ತು.

ಮೇಳದಲ್ಲಿ ಕೃಷಿಯಲ್ಲಿ ಉತ್ತಮ ಸಾಧನೆ ಮಾಡಿದ ರೈತರಿಗೆ ರಾಜ್ಯಪಾಲರು ರಾಜ್ಯ ಪ್ರಶಸ್ತಿಗಳನ್ನು ನೀಡಿ ಗೌರವಿಸಿದರು. ಚಿಕ್ಕಬಳ್ಳಾಪುರದ ಸಿ.ಆರ್.ರಾಧಾಕೃಷ್ಣರಿಗೆ ಸಿ ಭೈರೇಗೌಡ ಅತ್ಯುತ್ತಮ ರೈತ ಪ್ರಶಸ್ತಿ ಗೆ ಪಾತ್ರರಾದರೆ, ಬೆಳಗಾವಿಯ ರಾಜು ಸೆಟ್ಟಪ್ಪ ಬೈರುಗೋಳ ಅವರು ಎಂ.ಕರಿಗೌಡ ಅತ್ಯುತ್ತಮ ತೋಟಗಾರಿಕಾ ಕೃಷಿಕ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಇದೇ ವೇಳೆ ವ್ಯಾಲಿಡಿಕ್ಟರಿ ಕಾರ್ಯಕ್ಕಾಗಿ ಇನ್ನೂ ಮೂವರಿಗೆ ಪ್ರಶಸ್ತಿ ಪ್ರದಾನ ನೆರವೇರಿದೆ.

ಬೆಂಗಳೂರಿನಲ್ಲಿ ೧೯೬೫ರಿಂದಲೂ ವಾರ್ಷಿಕವಾಗಿ ಕೃಷಿ ಮೇಳ ನಡೆಯುತ್ತಿದ್ದು ಇದು ಸಾಕಷ್ಟು ಜನಪ್ರಿಯತೆ ಗಳಿಸಿದೆ. ಮೂರು ವರ್ಷಗಳ ಬರಗಾಲದ ಸನ್ನಿವೇಶಗಳನ್ನು ಹೊರತುಪಡಿಸಿದರೆ ಉಳಿದಂತೆ ಎಲ್ಲ ವರ್ಷಗಳಲ್ಲಿಯೂ ಮೇಳ ಯಶಸ್ವಿಯಾಗಿದೆ.

Leave a Reply

Your email address will not be published. Required fields are marked *