ಆನೇಕಲ್ ಸುದ್ದಿ

ನಕಲಿ ಬಾಬಾ- ೭ ಲಕ್ಷ ಪಂಗನಾಮ

 

ಆನೇಕಲ್ : ನೀವು ದೈವ ಭಕ್ತರಾ..? ಪೂಜೆ ಪುನಸ್ಕಾರ ಅಂತ ಸಿಕ್ಕ ಸಿಕ್ಕವರನ್ನೆಲ್ಲಾ ಮನೆಗೆ ಕರೆಸಿಕೊಳ್ತಿರಾ..? ಹಾಗೆ ಮಾಡೋದಾದ್ರೆ ಇನ್ನೂ ಮುಂದೆ ಸ್ವಲ್ಪ ಜೋಪಾನವಾಗಿರಿ.. ಯಾಕಂದ್ರೆ ಪೂಜೆಯ ನೆಪ ಮಾಡಿಕೊಂಡು ನಿಮಗೆ ಮಂಕು ಬೂದಿ ಎರಚಿ ಕ್ಷಣ ಮಾತ್ರದಲ್ಲಿ ಮನೆಯನ್ನ ಗುಡಿಸಿ ಗುಂಡಾಂತರ ಮಾಡುವ ಕಳ್ಳ ಕಪಟಿ ಸ್ವಾಮಿಜೀಗಳು ಈಗ ಸಿಲಿಕಾನ್ ಸಿಟಿಯಲ್ಲಿ ಓಡಾಡಿಕೊಂಡಿದ್ದಾರೆ. ಇದೇ ರೀತಿ ಆನೇಕಲ್‌ನ ಕಿತ್ತಗಾನಹಳ್ಳಿಯಲ್ಲಿ ಪೂಜೆ ನೆಪ ಮಾಡಿಕೊಂಡು ಬರೋಬರಿ ೭ ಲಕ್ಷ ರೂ ಮೌಲ್ಯದ ಚಿನ್ನ ಹಾಗೂ ಹಣವನ್ನ ದೋಚಿ ಕಳ್ಳ ಸ್ವಾಮೀಜೀ ಪರಾರಿಯಾಗಿದ್ದಾರೆ.

ಆನೇಕಲ್‌ನ ಕಿತ್ತಗಾನಹಳ್ಳಿಯಲ್ಲಿ ಇಂದು ಬೆಳ್ಳಗೆ ೧೧ ಗಂಟೆ ಸುಮಾರಿಗೆ ಘಟನೆ ನಡೆದಿದ್ದ ಇಲ್ಲಿನ ಕೃಷ್ಣಮೂರ್ತಿ ಹಾಗೂ ಲಕ್ಷ್ಮಿದೇವಿ ದಂಪತಿಗಳ ಮನೆಗೆ ಬಂದ ಕಳ್ಳ ಸ್ವಾಮೀಜೀ ಒಬ್ಬ ಅವರ ವೈಯಕ್ತಿಕ ವಿವರಗಳನ್ನ ನಿಖರವಾಗಿ ಹೇಳಿದ್ದಾನೆ. ಇದರಿಂದ ಆಶ್ವರ್ಯಗೊಂಡ ಲಕ್ಷ್ಮೀ ದೇವಿ ತನ್ನ ಮಗನ ಬಗ್ಗೆ ವಿಚಾರಣೆ ಮಾಡಿದಾಗ ಮಗನಿಗೆ ಗಂಡಾತರವಿದ್ದು ಅಕಾಲಿಕವಾಗಿ ಮರಣ ಹೊಂದುವುದಾಗಿ ಹೇಳಿದ್ದಾನೆ. ಇದರಿಂದ ಗಾಬರಿಯಾದ ಲಕ್ಷ್ಮೀ ದೇವಿ ಇದಕ್ಕೆ ಪರಿಹಾರ ಸೂಚಿಸಲು ತಿಳಿಸಿದ್ದಾರೆ, ಆಗ ಮನೆಯಲ್ಲಿ ವಿಶೇಷ ಪೂಜೆ ಮಾಡಿದರೆ ನಿಮ್ಮ ಮನೆಯ ಎಲ್ಲಾ ಗಂಡಾತರಗಳು ಬಗೆಹರಿಯುತ್ತದೆ ಎಂದು ಹೇಳಿ ಮನೆಯಲ್ಲಿ ಪೂಜೆ ಮಾಡಲು ಶುರು ಮಾಡಿಕೊಂಡಿದ್ದಾನೆ. ಇದಕ್ಕಾಗಿ ಮನೆಯಲ್ಲಿದ್ದ ಕೆಲವು ಆಭರಣಗಳನ್ನ ತಂದು ಇಡುವಂತೆ ಹೇಳಿದ್ದಾನೆ, ಅದರಂತೆ ಮನೆಯವರು ಮನೆಯಲ್ಲಿದ್ದ ಎಲ್ಲಾ ಆಭರಣಗಳನ್ನ ತಂದು ಇಟ್ಟಿದ್ದಾರೆ. ಇದೇ ವೇಳೆ ಖಾಲಿ ಬಾಕ್ಸ್ ಅವರಿಗೆ ನೀಡಿ ಆಭರಣ ಇದ್ದ ಬಾಕ್ಸ್ ಅನ್ನ ಕಪಟಿ ಸ್ವಾಮಿ ಕದ್ದು ಎಸ್ಕೆಪ್ ಆಗಿದ್ದಾನೆ. 

ಒಟ್ಟಿನಲ್ಲಿ ದೇವರ ಹೆಸರನ್ನ ಬಂಡವಾಳ ಮಾಡಿಕೊಂಡು ನಿಮ್ಮ ಕುಟುಂಬಕ್ಕೆ ತೊಂದರೆ ಕಾದಿದೆ ಎಂದು ಹೇಳುವ ಡೊಂಗಿ ಬಾಬಾಗಳ ಬಗ್ಗೆ ಇನ್ನೂ ಮುಂದೆಯಾದರೂ ಜನ ಎಚ್ಚೆತ್ತುಕೊಳ್ಳಬೇಕಿದೆ. ಇಲ್ಲವಾದರೆ ನಿಮ್ಮ ಮನೆಗೆ ಈ ಸ್ವಾಮಿಜೀಗಳು ಕನ್ನ ಹಾಕುವ ಕಾಲ ದೂರವಿಲ್ಲ..

ಆನೇಕಲ್ ನ್ಯೂಸ್.ಕಾಮ್

Leave a Reply

Your email address will not be published. Required fields are marked *