ಆರೋಗ್ಯ

ಆಸ್ಪತ್ರೆಗಳಲ್ಲಿ ಸೇವಾ ಸೌಲಭ್ಯ : ರೋಗಿಗಳು ನಿರಾಳ

ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಮಸೂದೆ ವಿರೋಧಿಸಿ ಖಾಸಗಿ ವೈದ್ಯರು ರಾಜ್ಯಾದ್ಯಂತ ನಡೆಸುತ್ತಿದ್ದ ಮುಷ್ಕರ ಕೈಬಿಟ್ಟು ಸೇವೆಗೆ ಹಾಜರಾಗಿರುವುದರಿಂದ ಎಲ್ಲಾ ಆಸ್ಪತ್ರೆಗಳಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದೆ.
ನಿನ್ನೆ ಸಂಜೆಯಿಂದಲೇ ಕೆಲವು ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆಗಳು ಆರಂಭವಾಗಿದ್ದರೂ, ಇಂದು ಬೆಳಿಗ್ಗೆಯಿಂದ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳ ಶುಶ್ರೂಷೆ ನಡೆಯುತ್ತಿದೆ.
ಹೊರರೋಗಿಗಳ ಘಟಕ (ಒಪಿಡಿ)ಗಳೂ ಎಂದಿನಂತೆ ಕಾರ್ಯ ನಿರ್ವಹಿಸುತ್ತಿದ್ದು, ಕಳೆದ ನಾಲ್ಕು ದಿನಗಳಿಂದ ರೋಗಿಗಳು ಅನುಭವಿಸಿದ ನರಕಯಾತನೆ ದೂರವಾದಂತಾಗಿದೆ.
ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳೂ ಸೇರಿದಂತೆ, ರಾಜ್ಯಾದ್ಯಂತ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ರೋಗಿಗಳ ಮುಖದಲ್ಲಿ ಮಂದಹಾಸ ಮೂಡುವಂತಾಗಿದೆ.

ಫಲಪ್ರದವಾದ ಮಾತುಕತೆ
ಮುಷ್ಕರ ನಿರತ ವೈದ್ಯರ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಗಾವಿಯ ಸುವರ್ಣ ಸೌಧದಲ್ಲಿ ನಿನ್ನೆ ಸಂಜೆ ನಡೆಸಿದ ಮಾತುಕತೆ ಫಲಪ್ರದವಾದ ಹಿನ್ನೆಲೆಯಲ್ಲಿ ಮುಷ್ಕರ ಕೈಬಿಡಲು ವೈದ್ಯರು ನಿರ್ಧರಿಸಿದ್ದರು.
ವೈದ್ಯರ ಕೆಲವು ಬೇಡಿಕೆಗಳ ಈಡೇರಿಕೆಗೆ ಸರ್ಕಾರ, ಸಕಾರಾತ್ಮಕವಾಗಿ ಸ್ಪಂದಿಸಿದ್ದರ ಪರಿಣಾಮ ಮುಷ್ಕರ ಅಂತ್ಯಗೊಳ್ಳಲು ಕಾರಣವಾಗಿದೆ.

ಸೋಮವಾರ ಮಂಡನೆ
ವೈದ್ಯರ ಒತ್ತಾಯದಂತೆ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಮಸೂದೆಗೆ ಕೆಲವು ಮಾರ್ಪಾಡು ಮಾಡಲು ಸರ್ಕಾರ ಸಮ್ಮತಿಸಿದ್ದು, ಮಾರ್ಪಾಡು ಮಾಡಲಾಗುವ ಮಸೂದೆಯನ್ನು ಸೋಮವಾರ ವಿಧಾನ ಮಂಡಲದ ಉಭಯ ಸದನಗಳಲ್ಲಿ ಮಂಡನೆಯಾಗಲಿದೆ.

Leave a Reply

Your email address will not be published. Required fields are marked *